ಕೇವಲ ಬರ ವೀಕ್ಷಣೆಯಲ್ಲ; ರೈತರ ಜೀವನ ದರ್ಶನ: ಮಳೆ ಬಂದು ಎಷ್ಟು ದಿನ ಆಯಿತು? ಯಾವಾಗ ಬಿತ್ತನೆ ಮಾಡಿದ್ದು? ರೈತನಿಂದ ಮಾಹಿತಿ ಪಡೆದ ಸಿಎಂ

ಬಾಗಲಕೋಟೆ: ಮಳೆ ಬಂದು ಎಷ್ಟು ದಿನ ಆಯಿತು? ಯಾವಾಗ ಬಿತ್ತನೆ ಮಾಡಿದ್ದು? ಎಷ್ಟು ಖರ್ಚಾಯಿತು ಎಂದು ಬಾಗಲಕೋಟೆಯ ಹುನಗುಂದದ ರೈತ ನಂದೆಪ್ಪ ಸಂಗಪ್ಪ ಬಾರಕೇರ ಅವರಿಂದ ಸಿಎಂ ಡಿ ಕೆ ಶಿವಕುಮಾರ್ ಅವರು ಪ್ರತಿಯೊಂದು ಮಾಹಿತಿಯನ್ನೂ ಪಡೆದರು.ಯುವ ರೈತನ ತಂದೆ- ತಾಯಿಗೆ “ಬರ ಬಂದಿದೆ, ಬೆಳೆ ಹಾಳಾಗಿದೆ ಎಂದು ಯೋಚನೆ ಮಾಡಬೇಡಿ, ನಾನು ಹಾಗೂ ನಮ್ಮ ಸರ್ಕಾರ ನಿಮ್ಮ ಜೊತೆಗಿದೆ” ಎಂದು ದೈರ್ಯ ತುಂಬಿದರು. ಜೊತೆಗೆ “ಗ್ಯಾರಂಟಿ ಯೋಜನೆಗಳು ತಲುಪುತ್ತಿವೆಯೇ? ನಿಮಗೆ” ಎಂದು ಸಿಎಂ ಕೇಳಲು ಮರೆಯಲಿಲ್ಲ.ಬಾಗಲಕೋಟೆ ಜಿಲ್ಲೆಗೆ ಬರ ವೀಕ್ಷಣೆಗೆ ಎಂದು ಶುಕ್ರವಾರ ಬಂದಿದ್ದ ಸಿಎಂ ಡಿ ಕೆ ಶಿವಕುಮಾರ್ ಅವರು ಹಾಗೂ ರೈತ ಕುಟುಂಬದ ನಡುವಿನ ಸಂಭಾಷಣೆ ಹೀಗಿತ್ತು. ಈ ವೇಳೆ ರೈತ ನಂದೆಪ್ಪ ಅವರು, “ಸರ ಈ ವರ್ಷ ಒಳ್ಳೆ ಮಳೆ ಬರತೈತ್ರಿ ಅಂತ ಉಳ್ಳಾಗಡ್ಡಿ, ಮೆಣಸಿನಕಾಯಿ ಬೆಳೆ ಹಾಕಿದ್ದೆ. ಯಾಕೋ ನಸೀಬು ಸರಿ ಇಲ್ಲಾರೀ” ಎಂದು ಬೇಸರಿಸಿದಾಗ, ರೈತನ ಹೆಗಲ ಮೇಲೆ “ನಾನಿದ್ದೇನೆ” ಎಂದು ಆತ್ಮವಿಶ್ವಾಸ ತುಂಬಿದರು.”ನಾನು ಕೇವಲ ಬರ ವೀಕ್ಷಣೆ ಮಾಡುತ್ತಿಲ್ಲ. ಉತ್ತರ ಕರ್ನಾಟಕ ಭಾಗದ ರೈತರ ಜೀವನ ದರ್ಶನ ಮಾಡುತ್ತಿದ್ದೇನೆ. ರೈತರ ಕಷ್ಟಗಳಿಗೆ ಸ್ಪಂದಿಸುವುದೇ ನನ್ನ ಮೊದಲ ಆದ್ಯತೆ” ಎಂದು ಆತ್ಮಸ್ಥೈರ್ಯ ತುಂಬಿದರು.
