ವಿವಿಧ ಕಳ್ಳತನ ಪ್ರಕರಣ ಭೇದಿಸಿದ ವಿಜಯನಗರ ಪೊಲೀಸರು: 83 ಬೈಕ್, 10 ಕಾರು, ಚಿನ್ನಾಭರಣ, ನಗದು ಸೇರಿ ವಿವಿಧ ವಸ್ತುಗಳು ವಾಪಸ್
ಒಟ್ಟು ಕಳ್ಳತನವಾದ 4.57 ಕೋಟಿ ಮೌಲ್ಯದ ಸ್ವತ್ತು ಮಾಲೀಕರಿಗೆ ಹಸ್ತಾಂತರಿಸಿರುವ ಪೊಲೀಸರಿಗೆ ಐಜಿಪಿ ಅಭಿನಂದನೆ ಸಲ್ಲಿಸಿದ್ದಾರೆ.
ವಿಜಯನಗರ: ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ದಾಖಲಾಗಿದ್ದ ಕಳ್ಳತನ ಪ್ರಕರಣಗಳನ್ನು ಭೇದಿಸಿದ ಪೊಲೀಸರು, ಸುಮಾರು ₹4.57 ಕೋಟಿ ಮೌಲ್ಯದ ಕಳುವಾದ ಸ್ವತ್ತುಗಳನ್ನು ಮರುಪಡೆದು, ಅವುಗಳನ್ನು ನಿಜವಾದ ಮಾಲೀಕರಿಗೆ ನಗರದ ಡಿಎಆರ್ ಮೈದಾನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಹಸ್ತಾಂತರಿಸಿದರು.
ಜಿಲ್ಲೆಯ 21 ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ಕಳೆದ ಒಂದು ವರ್ಷದಲ್ಲಿ ನಡೆದ ಕಳ್ಳತನ ಪ್ರಕರಣಗಳನ್ನು ತನಿಖೆ ನಡೆಸಿದ ಪೊಲೀಸರು, ನಗದು, ಚಿನ್ನಾಭರಣ, ದ್ವಿಚಕ್ರ ವಾಹನಗಳು, ಕಾರುಗಳು, ಬ್ಯಾಟರಿಗಳು, ಪವರ್ ಸಪ್ಲೈ ಕೇಬಲ್ ಸೇರಿದಂತೆ ವಿವಿಧ ವಸ್ತುಗಳನ್ನು ಪತ್ತೆಹಚ್ಚಿ ಜಪ್ತಿ ಮಾಡಿದ್ದರು. ತನಿಖೆ ಪೂರ್ಣಗೊಂಡ ಹಿನ್ನೆಲೆಯಲ್ಲಿ ನ್ಯಾಯಾಲಯದ ಅಗತ್ಯ ಪ್ರಕ್ರಿಯೆಗಳನ್ನು ಅನುಸರಿಸಿ ಸ್ವತ್ತುಗಳನ್ನು ವಾರಸುದಾರರಿಗೆ ಹಾಗೂ ಮಾಲೀಕರಿಗೆ ಹಿಂತಿರುಗಿಸಲಾಯಿತು.
ಹಸ್ತಾಂತರಿಸಲಾದ ಸ್ವತ್ತುಗಳಲ್ಲಿ 83 ದ್ವಿಚಕ್ರ ವಾಹನಗಳು, 10 ಕಾರುಗಳು, ಚಿನ್ನಾಭರಣ, ನಗದು ಹಾಗೂ ಇತರ ಬೆಲೆಬಾಳುವ ವಸ್ತುಗಳು ಸೇರಿವೆ. ಕಳ್ಳತನದಿಂದ ಕಳೆದುಕೊಂಡಿದ್ದ ಆಸ್ತಿಯನ್ನು ಮರಳಿ ಪಡೆದ ಮಾಲೀಕರು ಪೊಲೀಸ್ ಇಲಾಖೆಯ ಕಾರ್ಯಕ್ಷಮತೆಯನ್ನು ಶ್ಲಾಘಿಸಿದರು. ಕಾರ್ಯಕ್ರಮದಲ್ಲಿ ಬಳ್ಳಾರಿ ವಲಯ ಐಜಿಪಿ ಡಾ. ಹರ್ಷ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಾಹ್ನವಿ ಅವರು ಫಲಾನುಭವಿಗಳಿಗೆ ಸ್ವತ್ತುಗಳನ್ನು ಹಸ್ತಾಂತರಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಐಜಿಪಿ ಡಾ. ಹರ್ಷ, “ಕಳ್ಳತನ ಪ್ರಕರಣಗಳನ್ನು ತ್ವರಿತವಾಗಿ ಭೇದಿಸಿ ಅಪರಾಧಿಗಳನ್ನು ಬಂಧಿಸುವುದರ ಜೊತೆಗೆ, ಕಳುವಾದ ಸ್ವತ್ತುಗಳನ್ನು ಮರು ಪಡೆದು ಮಾಲೀಕರಿಗೆ ಹಸ್ತಾಂತರಿಸುವುದು ಪೊಲೀಸ್ ಇಲಾಖೆಯ ಪ್ರಮುಖ ಜವಾಬ್ದಾರಿಯಾಗಿದೆ” ಎಂದರು. ತನಿಖೆಯನ್ನು ಪರಿಣಾಮಕಾರಿಯಾಗಿ ನಡೆಸಿ ಪ್ರಕರಣಗಳನ್ನು ಯಶಸ್ವಿಯಾಗಿ ಭೇದಿಸಿದ ಜಿಲ್ಲೆಯ ಎಲ್ಲಾ ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿಯ ಕಾರ್ಯವನ್ನು ಶ್ಲಾಘಿಸಿ ಅಭಿನಂದಿಸಿದರು.
ಯಾವುದೇ ಅಪರಾಧವಿರಲಿ ತಕ್ಷಣ ಮಾಹಿತಿ ನೀಡಿ: ಎಸ್‌ಪಿ ಜಾಹ್ನವಿ ಮಾತನಾಡಿ, “ಸಾರ್ವಜನಿಕರು ತಮ್ಮ ಆಸ್ತಿಪಾಸ್ತಿಗಳ ಸುರಕ್ಷತೆಗೆ ಅಗತ್ಯ ಮುನ್ನೆಚ್ಚರಿಕೆ ವಹಿಸಬೇಕು. ಯಾವುದೇ ಕಳ್ಳತನ ಅಥವಾ ಅನುಮಾನಾಸ್ಪದ ಚಟುವಟಿಕೆ ಕಂಡುಬಂದರೆ ತಕ್ಷಣ ಪೊಲೀಸರಿಗೆ ಮಾಹಿತಿ ನೀಡಬೇಕು” ಎಂದು ಮನವಿ ಮಾಡಿದರು.
ಜಿಲ್ಲೆಯ ವಿವಿಧ ಠಾಣೆಗಳ ತನಿಖಾ ತಂಡಗಳು ಸಮನ್ವಯದಿಂದ ಕಾರ್ಯನಿರ್ವಹಿಸಿದ ಪರಿಣಾಮ ಹೆಚ್ಚಿನ ಪ್ರಮಾಣದ ಸ್ವತ್ತುಗಳನ್ನು ಮರುಪಡೆಯಲು ಸಾಧ್ಯವಾಗಿದೆ. ಈ ಕಾರ್ಯಾಚರಣೆ ಸಾರ್ವಜನಿಕರಲ್ಲಿ ಪೊಲೀಸ್ ಇಲಾಖೆಯ ಮೇಲಿನ ವಿಶ್ವಾಸವನ್ನು ಮತ್ತಷ್ಟು ಬಲಪಡಿಸಿದೆ. ಕಾರ್ಯಕ್ರಮದಲ್ಲಿ ವಿವಿಧ ಪೊಲೀಸ್ ಅಧಿಕಾರಿಗಳು, ಸಿಬ್ಬಂದಿ ಹಾಗೂ ಸ್ವತ್ತುಗಳನ್ನು ಪಡೆದ ಫಲಾನುಭವಿಗಳು ಉಪಸ್ಥಿತರಿದ್ದರು.

