ಎಂ.ಎಸ್.ಪಿ ನಿಗದಿ ವರೆಗೆ ಸಕ್ಕರೆ ಮಾರಾಟ ಬಂದ್ ಮಾಡಿ ಮಾಕವಳ್ಳಿ ಹೇಮಗಿರಿ ಸಕ್ಕರೆ ಕಾರ್ಖಾನೆ ಗೋದಾಮಿಗೆ ರೈತರ ಮುತ್ತಿಗೆ

ಕೆ.ಆರ್.ಪೇಟೆ:ತಾಲ್ಲೂಕಿನ ಕಸಬಾ ಹೋಬಳಿಯ ಮಾಕವಳ್ಳಿ ಹೇಮಗಿರಿ ಸಕ್ಕರೆ ಕಾರ್ಖಾನೆಯ ಸಕ್ಕರೆ ಗೋದಾಮಿಗೆ ಎಂ.ಎಸ್.ಪಿ ನಿಗದಿ ವರೆಗೆ ಸಕ್ಕರೆ ಮಾರಾಟ ಬಂದ್ ಮಾಡಿ ಎಂದು ಮುತ್ತಿಗೆ ಹಾಕಿ ಕರ್ನಾಟಕ ರಾಜ್ಯ ಕಬ್ಬು ಬೆಳೆಗಾರರು ಹಾಗೂ ರಾಜ್ಯ ರೈತ ಸಂಘದ ಪದಾಧಿಕಾರಿಗಳು ಸೂಕ್ತ ಬೆಂಬಲ ಬೆಲೆಗೆ ಆಗ್ರಹಿಸಿ ಪ್ರತಿಭಟನೆ ನಡೆಸಿದರು.

ಜಿಲ್ಲಾ ಉಪಾಧ್ಯಕ್ಷ ಮರುವನಹಳ್ಳಿ ಶಂಕರ್ ಕಳೆದ ಒಂದೂವರೆ ತಿಂಗಳಿನಿಂದ ಕರ್ನಾಟಕ ರಾಜ್ಯದ ಕಬ್ಬು ಬೆಳೆಗಾರರು ಸಕ್ಕರೆಯ ಎಂಎಸ್ಪಿ ದರವನ್ನು 31 ರೂ.ನಿಂದ 60 ರೂ.ಗೆ ಹೆಚ್ಚಿಸಬೇಕೆಂದು ನಿರಂತರ ಹೋರಾಟ ನಡೆಸುತ್ತಿದ್ದಾರೆ.ಆದರೂ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಮೌನ ವಹಿಸಿರುವುದು ರೈತರ ಆಕ್ರೋಶಕ್ಕೆ ಕಾರಣವಾಗಿದೆ. 8-9 ವರ್ಷದಿಂದ ಎಂಎಸ್ಪಿ ಹೆಚ್ಚಳವಾಗದ ಕಾರಣ ಎಫ್ಆರ್ ಪಿ ದರ ನ್ಯಾಯಯುತವಾಗಿ ನಿಗದಿಯಾಗುತ್ತಿಲ್ಲ.ಮಾರುಕಟ್ಟೆಯಲ್ಲಿ ಸಕ್ಕರೆ 60-70 ರೂ.ಗೆ ಮಾರಾಟವಾಗುತ್ತಿದ್ದು, ರೈತರಿಗೆ ಅನ್ಯಾಯವಾಗುತ್ತಿದೆ. ರಾಜ್ಯದ 80 ಸಕ್ಕರೆ ಕಾರ್ಖಾನೆಗಳು ಕೇಂದ್ರದ ಮೇಲೆ ಒತ್ತಡ ಹಾಕುತ್ತಿಲ್ಲ ಎಂದು ಕಿಡಿಕಾರಿದ ಬಳಿಕ ಹೇಮಗಿರಿ ಶುಗರ್ ಕಾರ್ಖಾನೆಯ ಕೆಲ ಸಿಬ್ಬಂದಿಗಳು ರೈತರ ಮೇಲೆ ದೌರ್ಜನ್ಯ ನಡೆಸಿ, ಅಸಡ್ಡೆಯಿಂದ ಮಾತನಾಡಿದ್ದಾರೆ ಎಂದು ರೈತರು ಗಂಭೀರ ಆರೋಪ ಮಾಡಿದ ಅವರು ಕಬ್ಬು ಕಟಾವು ವೆಚ್ಚದ ಹೆಸರಲ್ಲಿ ಪ್ರತಿ ಟನ್ಗೆ ಸುಮಾರು 1500ನಿ ಸಾವಿರ ಹಣವನ್ನು ಕಾರ್ಖಾನೆ ಕರತಂದಿರುವ ಮಹಾರಾಷ್ಟ್ರ ಉತ್ತರ ಕರ್ನಾಟಕ ಮೂಲದ ಕಾರ್ಮಿಕರು ಕಬ್ಬು ಕಟಾವು ಮಾಡಲು ಹೇಳುತ್ತಿದ್ದಾರೆ ಇದು ನಿಜಕ್ಕೂ ಖಂಡನೀಯ ಎಂದು ಆರೋಪಿಸಿ ರೈತರು ತಮ್ಮ ನ್ಯಾಯಯುತ ಬೇಡಿಕೆಗಾಗಿ ಶಾಂತಿಯುತವಾಗಿ ಪ್ರತಿಭಟನೆ ನಡೆಸುತ್ತಿದ್ದರೆ, ಕಾರ್ಖಾನೆಯ ಸಿಬ್ಬಂದಿಗಳು ಏಕವಚನದಲ್ಲಿ ಮಾತನಾಡಿ, ಬೆದರಿಕೆ ಹಾಕುವ ರೀತಿಯಲ್ಲಿ ವರ್ತಿಸಿದ್ದಾರೆ. ಕಾರ್ಖಾನೆ ಇರುವುದು ರೈತರ ಕಬ್ಬಿನಿಂದ,ರೈತರನ್ನು ಗೌರವದಿಂದ ಕಾಣಬೇಕು ದೌರ್ಜನ್ಯ ಖಂಡನೀಯ ಎಂದು ರೈತ ಮುಖಂಡರು ತೀವ್ರ ಆಕ್ರೋಶ ವ್ಯಕ್ತಪಡಿಸಿ ಖಂಡಿಸಿದರು.
ಬಳಿಕ ಮಾತನಾಡಿದ ತಾಲ್ಲೂಕು ರೈತ ಸಂಘದ ಅಧ್ಯಕ್ಷ ಕಾರಿಗನಹಳ್ಳಿ ಪುಟ್ಟೇಗೌಡ ರಾಜ್ಯ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರು ನನ್ನ ಮನೆಯಿಂದ ಹಣ ಕೊಡಬೇಕಾ ಎಂದು ರೈತರ ಬೇಡಿಕೆಗೆ ಹಗುರವಾಗಿ ಮಾತನಾಡಿರುವುದನ್ನು ತೀವ್ರವಾಗಿ ಖಂಡಿಸಿದರು.ರೈತರು ಭಿಕ್ಷೆ ಕೇಳುತ್ತಿಲ್ಲ, ತಮ್ಮ ಬೆಳೆದ ಬೆಳೆಗೆ ನ್ಯಾಯಯುತ ಬೆಲೆ ಕೇಳುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಈ ವೇಳೆ ನೂರಾರು ರೈತರು ಏಕಾಏಕಿ ಕಾರ್ಖಾನೆಯ ಒಳಗೆ ಪ್ರವೇಶಿಸಿ, ಸಕ್ಕರೆ ಗೋದಾಮಿಗೆ ಬೀಗ ಜಡಿದು, ಗೋದಾಮಿನ ಮುಂಭಾಗದಲ್ಲೇ ಧರಣಿ ಕುಳಿತು ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಎಂಎಸ್ಪಿ ನಿಗದಿ ಆಗುವವರೆಗೂ ಬೀಗ ತೆಗೆಯಲು ಬಿಡುವುದಿಲ್ಲ ಎಂದು ಪಟ್ಟು ಹಿಡಿದರು.ಪ್ರತಿಭಟನೆ ಸಂದರ್ಭದಲ್ಲಿ ರೈತರು ಕಾರ್ಖಾನೆ ಒಳಗೆ ನುಗ್ಗಲು ಯತ್ನಿಸಿದಾಗ ರೈತ ಮುಖಂಡರು ಹಾಗೂ ಭದ್ರತೆಗೆ ನಿಯೋಜನೆಗೊಂಡಿದ್ದ ಕಿಕ್ಕೇರಿ ಪೊಲೀಸ್ ಇನ್ಸ್ಪೆಕ್ಟರ್ ಜಯರಾಮ್ ನಡುವೆ ಕೆಲಕಾಲ ಮಾತಿನ ಚಕಮಕಿ ನಡೆಯಿತು. ಪೊಲೀಸರು ರೈತರನ್ನು ತಡೆಯಲು ಯತ್ನಿಸಿದಾಗ ವಾಗ್ವಾದ ನಡೆದು ಕೆಲಕಾಲ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿತ್ತು.
ಬಳಿಕ ಕಾರ್ಖಾನೆಯ ಹಿರಿಯ ಮುಖ್ಯ ವ್ಯವಸ್ಥಾಪಕ ವರದರಾಜು ಅವರ ಮುಖಾಂತರ ಸೂಕ್ತ ಬೆಂಬಲ ಬೆಲೆ ನಿಗದಿಯಾಗುವವರೆಗೂ ಸಕ್ಕರೆ ಮಾರಾಟ ಮಾಡಬಾರದು ಎಂದು ರೈತ ಬೆಳೆಗಾರರ ಸಂಘದ ಅಧ್ಯಕ್ಷ ಕಾರಿಗನಹಳ್ಳಿ ಕುಮಾರ್ ನೇತೃತ್ವದಲ್ಲಿ ಮನವಿ ಸಲ್ಲಿಸಿ ಎಚ್ಚರಿಕೆ ನೀಡಿದರು.ಒಂದು ವೇಳೆ ಮನವಿ ತಿರಸ್ಕರಿಸಿ ಮಾರಾಟ ಮಾಡಲು ಮುಂದಾದರೆ ಮುಂದಾಗುವ ಅನಾಹುತಕ್ಕೆ ಕಾರ್ಖಾನೆ ಆಡಳಿತವೇ ಹೊಣೆ ಎಂದು ಎಚ್ಚರಿಸಿ ಕೂಡಲೇ ಎಂಎಸ್ಪಿ ಹೆಚ್ಚಳ ಮಾಡಿಸಿ ಪ್ರತಿ ಮೆ.ಟನ್ ಕಬ್ಬಿಗೆ ಕನಿಷ್ಠ ರೂ. 4,500 ಎಫ್ಆರ್ಪಿ ಹಾಗೂ ರಾಜ್ಯ ಸರ್ಕಾರದಿಂದ ರೂ. 1000 ಹೆಚ್ಚುವರಿ ಬೆಂಬಲ ಬೆಲೆ ನೀಡಬೇಕು ಎಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ರೈತ ಸಂಘದ ಜಿಲ್ಲಾ ಉಪಾಧ್ಯಕ್ಷ ಮರುವನಹಳ್ಳಿ ಶಂಕರ್, ತಾಲ್ಲೂಕು ರೈತ ಸಂಘದ ಅಧ್ಯಕ್ಷ ಕಾರಿಗನಹಳ್ಳಿ ಪುಟ್ಟೇಗೌಡ , ತಾಲ್ಲೂಕು ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ಕಾರಿಗನಹಳ್ಳಿ ಕುಮಾರ್, ಉಪಾಧ್ಯಕ್ಷ ವಡಕಹಳ್ಳಿ ಮಂಜುನಾಥ್, ಮಾಕವಳ್ಳಿ ಎಂ.ಸಿ ರಾಮೇಗೌಡ, ಕಿಕ್ಕೇರಿ ಕಾಯಿ ಮಂಜೇಗೌಡ, ಬಲರಾಮು, ಕರೋಟಿ ತಮ್ಮಯ್ಯ, ಶಿವೇಗೌಡ, ಕಾರಿಗನಹಳ್ಳಿ ಹೋರಿ ಕಾಂತರಾಜು, ಹಿರಿಕಳಲೆ ಬಸವರಾಜ್, ನಾರಾಯಣಸ್ವಾಮಿ,ಕಿಟ್ಟಿ, ಮಹೇಶ್ ಸೇರಿದಂತೆ ನೂರಾರು ರೈತರು ಉಪಸ್ಥಿತರಿದ್ದರು ವರದಿ, ಎಸ್ ರವಿ ಹೊನ್ನೇನಹಳ್ಳಿ
