August 16, 2026

ಬೆಳೆ ಬೆಳೆಯಲು ನಾಲೆಗಳಿಗೆ ನೀರು ಹಾಯಿಸಿ: ನಾರಾಯಣ್

0

ಬನ್ನೂರು: ಇತ್ತೀಚೆಗೆ ಸುರಿಯುತ್ತಿರುವ ಮಳೆಯಿಂದಾಗಿ ಕೆಆರ್‌ಎಸ್ ಜಲಾಶಯ ತುಂಬುತ್ತಿದ್ದು, ರಾಜ್ಯದ ಜನರ ಹಿತವನ್ನು ಕಾಪಾಡುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಕೂಡಲೇ ನಾಲೆಗಳಿಗೆ ನೀರನ್ನು ಹಾಯಿಸುವ ಮೂಲಕ ರೈತರು ಕೃಷಿ ಚಟುವಟಿಕೆಯಲ್ಲಿ ತೊಡಗುವಂತೆ ಮಾಡಬೇಕೆಂದು ಕರ್ನಾಟಕ ರಾಜ್ಯ ರೈತ ಸಂಘ ಮೂಲಸಂಘಟನೆ ಜಿಲ್ಲಾಧ್ಯಕ್ಷ ಬನ್ನೂರು ನಾರಾಯಣ್ ತಿಳಿಸಿದರು.ಅವರು ಪಟ್ಟಣದ ಕಾವೇರಿ ಸೇತುವೆಯ ಬಳಿಯಲ್ಲಿ ತಮಿಳುನಾಡಿಗೆ ನೀರು ಬಿಡುವುದನ್ನು ವಿರೋಧಿಸಿ ನಡೆಸಿದ ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದರು. ರಾಜ್ಯ ಸರ್ಕಾರ ಬರದಿಂದ ತತ್ತರಿಸಿದೆ. ಮುಂಗಾರು ಕೈಕೊಟ್ಟಿದ್ದು, ರೈತರು ಕೃಷಿಗಾಗಿ ಮಳೆಯನ್ನು ಎದುರು ನೋಡುತ್ತಿದ್ದಾರೆ. ರೈತರು ಮುಂದಿನ ಜೀವನಕ್ಕಾಗಿ ಪರಿತಪಿಸುವಂತಾಗಿದ್ದು, ಸರ್ಕಾರ ರೈತರ ಹಿತವನ್ನು ಕಾಯಲು ರೈತರಿಗೆ ಅನುಕೂಲವಾದ ಕಾರ್ಯವನ್ನು ಜಾರಿ ಮಾಡಬೇಕೆಂದು ಅವರು ಆಗ್ರಹಿಸಿದರು.ಕೆಆರ್‌ಎಸ್ ಅಣೆಕಟ್ಟಿನಲ್ಲಿ ಒಳ ಹರಿವು ಹೆಚ್ಚಾಗುತ್ತಿರುವುರಿಂದ ಕೂಡಲೇ ಸರ್ಕಾರ ನೀರಾವರಿಯ ಅಧಿಕಾರಿಗಳ ಸಭೆಯನ್ನು ಕರೆದು ನಾಲೆಗಳಿಗೆ ನೀರು ಬಿಡುವಂತೆ ಆದೇಶವನ್ನು ನೀಡಬೇಕು. ರೈತರಿಗೆ ಕಡಿಮೆ ದರದಲ್ಲಿ ಬಿತ್ತನೆ ಬೀಜವನ್ನು ವಿತರಿಸುವ ಕಾರ್ಯವನ್ನು ಮಾಡಬೇಕು. ಕಾಳಸಂತೆಯಲ್ಲಿ ಗೊಬ್ಬರ ಮಾರಾಟವಾಗುವುದನ್ನು ತಪ್ಪಿಸಲು ಸೂಕ್ತವಾದ ಕಾನೂನು ಜಾರಿ ಮಾಡಬೇಕೆಂದು ಅವರು ಆಗ್ರಹಿಸಿದರು.ಪ್ರತಿಭಟನೆಯಲ್ಲಿ ಶಿವರಾಂ, ರಂಗಸ್ವಾಮಿ, ನಾಗಪ್ಪ, ಕೃಷ್ಣ, ಜೈರಾಮ, ಗಣೇಶ, ಹುನುಗನಹಳ್ಳಿ ವಿಶ್ವನಾಥ್, ಮಾದೇಗೌಡ, ನಾಗೇಶ್, ಕೇತುಪುರ ನಾಗರಾಜು, ಮಲಿಯೂರು ರಾಜಣ್ಣ, ಕೃಷ್ಣಗೌಡ, ರಮೇಶ್, ಹೇಮಂತ್ ಸೇರಿದಂತೆ ವಿವಿಧ ಗ್ರಾಮದ ರೈತಾಪಿವರ್ಗದವರು ಇದ್ದರು.

Leave a Reply

Your email address will not be published. Required fields are marked *