August 16, 2026

ಭಾರತೀಯ ಭಾಷಾ ಸಂಸ್ಥಾನದಲ್ಲಿ ಕನ್ನಡನಾಡು ಮತ್ತು ಹೊರನಾಡಿನ ಕನ್ನಡ ಶಾಸನಗಳ ಕುರಿತು ಕಾರ್ಯಾಗಾರ

0

ಭಾರತೀಯ ಭಾಷಾ ಸಂಸ್ಥಾನದಲ್ಲಿ ಕನ್ನಡನಾಡು ಮತ್ತು ಹೊರನಾಡಿನ ಕನ್ನಡ ಶಾಸನಗಳ ಕುರಿತ ಕಾರ್ಯಾಗಾರದ ಎರಡನೇ ದಿನದ ವಿಚಾರಗೋಷ್ಠಿಗಳು ಯಶಸ್ವಿ

ಮೈಸೂರು, ಆ. 6: ಭಾರತೀಯ ಭಾಷಾ ಸಂಸ್ಥಾನದ (CIIL) ಶಾಸ್ತ್ರೀಯ ಕನ್ನಡ ಅತ್ಯುನ್ನತ ಅಧ್ಯಯನ ಕೇಂದ್ರದ ವತಿಯಿಂದ ಆಯೋಜಿಸಲಾಗಿರುವ “ಕನ್ನಡನಾಡು ಮತ್ತು ಹೊರನಾಡಿನ ಕನ್ನಡ ಶಾಸನಗಳು” ವಿಷಯದ ಎರಡು ದಿನಗಳ ರಾಜ್ಯಮಟ್ಟದ ಕಾರ್ಯಾಗಾರದ ಎರಡನೇ ದಿನವಾದ ಗುರುವಾರ, ಆಗಸ್ಟ್ 6, ವಿವಿಧ ಆಯಾಮಗಳನ್ನು ಒಳಗೊಂಡ ವಿದ್ವತ್‌ಪೂರ್ಣ ಉಪನ್ಯಾಸಗಳು ಮತ್ತು ವಿಚಾರ ವಿನಿಮಯಗಳು ನಡೆದವು.

ಕಾರ್ಯಾಗಾರದ ಎರಡನೇ ದಿನದ ಗೋಷ್ಠಿ ಬೆಳಿಗ್ಗೆ 10.00 ಗಂಟೆಗೆ ಆರಂಭಗೊಂಡು, ಶಾಸನ ಅಧ್ಯಯನದ ವೈವಿಧ್ಯಮಯ ಕ್ಷೇತ್ರಗಳ ಕುರಿತು ಪರಿಣತ ವಿದ್ವಾಂಸರು ತಮ್ಮ ಸಂಶೋಧನಾ ಅನುಭವಗಳನ್ನು ಹಂಚಿಕೊಂಡರು.

ಮೊದಲ ಗೋಷ್ಠಿಯಲ್ಲಿ ಡಾ. ಸಣ್ಣಪಾಪಯ್ಯ ಅವರು “ಬುಕ್ಕರಾಯನ ಶಾಸನ” ಕುರಿತು ಮಾತನಾಡಿ, ವಿಜಯನಗರ ಕಾಲಘಟ್ಟದ ರಾಜಕೀಯ, ಆಡಳಿತಾತ್ಮಕ ಹಾಗೂ ಭಾಷಾ ವೈಶಿಷ್ಟ್ಯಗಳನ್ನು ಶಾಸನಗಳ ಆಧಾರದ ಮೇಲೆ ವಿವರಿಸಿದರು.

ಎರಡನೇ ಅಧಿವೇಶನದಲ್ಲಿ ಡಾ. ಅನ್ನಪೂರ್ಣ ಎನ್.ಎಸ್. ಅವರು “ಕುರ್ಕ್ಯಾಲ ಶಾಸನ” ಕುರಿತು ಉಪನ್ಯಾಸ ನೀಡಿ, ಶಾಸನದಲ್ಲಿನ ಐತಿಹಾಸಿಕ ಮಾಹಿತಿಯ ಜೊತೆಗೆ ಅದರ ಭಾಷಿಕ ಮತ್ತು ಸಾಂಸ್ಕೃತಿಕ ಮಹತ್ವವನ್ನು ವಿವರಿಸಿದರು.

ಮೂರನೇ ಗೋಷ್ಠಿಯಲ್ಲಿ ಡಾ. ಮಾಲಿನಿ ಎನ್. ಅಭ್ಯಂಕರ್ ಅವರು “ಅರ್ಜುನವಾಡ ಶಾಸನ” ಕುರಿತು ಉಪನ್ಯಾಸ ನೀಡಿ, ಶಾಸನಗಳ ಮೂಲಕ ಬಸವಣ್ಣನವರ ಕಾಲ ಮತ್ತು ‌ವಂಶಾವಳಿ, ಶಾಸನದ ಭಾಷೆ ಕುರಿತು ಪ್ರಬಂಧ ಮಂಡಿಸಿದರು.

ನಂತರ ನಡೆದ ಗೋಷ್ಠಿಯಲ್ಲಿ ಡಾ. ರಾಧಾಮಣಿ ಅವರು “ಹಲ್ಮಿಡಿ ಶಾಸನ ಮತ್ತು ಆತಕೂರು ಶಾಸನ” ಕುರಿತು ಮಾತನಾಡಿ, ಎರಡೂ ಶಾಸನಗಳಲ್ಲಿನ ಭಾಷಾ, ಸಾಹಿತ್ಯ ಹಾಗೂ ಇತಿಹಾಸ ಸಂಬಂಧಿತ ಮಾಹಿತಿಯನ್ನು ತುಲನಾತ್ಮಕವಾಗಿ ವಿಶ್ಲೇಷಿಸಿದರು.

ಮಧ್ಯಾಹ್ನದ ಅಧಿವೇಶನದಲ್ಲಿ ಡಾ. ರಕ್ಷಿತ್ ಅ.ಪ ಅವರು ಅವರು “ಲಕ್ಕುಂಡಿ ಶಾಸನ”, ಡಾ. ಪವಿತ್ರ ಬಿ. ಅವರು “ತಾಳಗುಂದ ಶಾಸನ ಮತ್ತು ಬಾದಾಮಿ ಶಾಸನ”, ಡಾ. ಸುಶ್ಮಿತಾ ವೈ ಅವರು “ದೇಕಬ್ಬೆ ಶಾಸನ”, ಹಾಗೂ
ಡಾ. ಯಲ್ಲವ್ವ ಹೆಬ್ಬಳ್ಳಿ ಅವರು “ಕೋಡಿಮಠ ಶಾಸನ” ಕುರಿತು ಉಪನ್ಯಾಸಗಳನ್ನು ನೀಡಿ, ಶಾಸನಗಳಲ್ಲಿನ ಭಾಷಾ ಬೆಳವಣಿಗೆ, ಸಾಮಾಜಿಕ ಇತಿಹಾಸ ಮತ್ತು ಸಾಂಸ್ಕೃತಿಕ ಅಂಶಗಳನ್ನು ವಿಶದಪಡಿಸಿದರು.

ದಿನದ ಕೊನೆಯಲ್ಲಿ ನಡೆದ ಸಮಾರೋಪ ಸಮಾರಂಭದಲ್ಲಿ ಕಾರ್ಯಾಗಾರದ ಪ್ರಮುಖ ಅಂಶಗಳನ್ನು ಅವಲೋಕಿಸಲಾಯಿತು. ವಿಶ್ರಾಂತ ಪ್ರಾಧ್ಯಾಪಕರಾದ
ಡಾ. ಎಂ. ವಿ. ಶ್ರೀನಿವಾಸ ಅವರು ಸಮಾರೋಪ ಭಾಷಣ ಮಾಡಿದರು. ಶಾಸನಗಳಲ್ಲಿ ಕೆಲವು ಸಾಲುಗಳು ‌ತ್ರುಟಿತವಾಗಿವೆ, ಮುರಿದುಹೋಗಿವೆ ಎಂಬುದನ್ನು ಕೇಳಲು ಕಷ್ಟವಾಗುತ್ತದೆ. 5000 ವರ್ಷಕ್ಕೂ ಹಿಂದಿನ ಇತಿಹಾಸ ಹೊಂದಿರುವ ಮಾನವ ಇವುಗಳನ್ನು ಕಾಪಾಡಿಕೊಳ್ಳಲು ಮನಸ್ಸು ಮಾಡಲಿಲ್ಲ ಎಂದು ವಿಷಾದ ವ್ಯಕ್ತಪಡಿಸಿದರು. ಕನ್ನಡ ಶಾಸನಗಳನ್ನು ಸಂಗ್ರಹಿಸಿ ಪ್ರಕಟಿಸುವಲ್ಲಿ ರೈಸ್, ಪ್ಲೀಟ್ ಮುಂತಾದ ವಿದೇಶಿ ವಿದ್ವಾಂಸರ ಕೊಡುಗೆ ಅಪಾರ. ಬಿ. ಎಲ್. ರೈಸ್ 20,000 ಕ್ಕೂ ಹೆಚ್ಚಿನ ಶಾಸನಗಳನ್ನು ಹುಡುಕಿ, ಒಕ್ಕಣೆ ಬರೆಯುವಲ್ಲಿ ಅವರ ಪಾತ್ರ ಮಹತ್ವದ್ದು. ಆದರೆ ಕನ್ನಡಿಗರಾಗಿ ನಾವು ಎಷ್ಟರಮಟ್ಟಿಗೆ ಶಾಸನಗಳ ಅಧ್ಯಯನ ಮತ್ತು ಸಂರಕ್ಷಣೆಯಲ್ಲಿ ತೊಡಗಿದ್ದೇವೆ ಎಂದರು. ಆಂಧ್ರಪ್ರದೇಶದಲ್ಲಿ ಕನ್ನಡ ನಾಡಿಗೆ ಸಂಬಂಧಿಸಿದ ಸುಮಾರು ಸಾವಿರಕ್ಕೂ ಹೆಚ್ಚು ಶಾಸನಗಳಿವೆ.‌ ಗಡಿನಾಡು ಪ್ರದೇಶಗಳಲ್ಲಿಯೂ ಇಂತಹ ಕನ್ನಡ ಶಾಸನಗಳಿವೆ. ಅವುಗಳನ್ನು ಸಮಗ್ರವಾಗಿ ಅಧ್ಯಯನ ಮಾಡುವ ಅಗತ್ಯವಿದೆ ಎಂದರು. ಇತಿಹಾಸಕಾರರಿಗೆ, ಶಾಸನ ತಜ್ಞರಿಗೆ ಬಹುಭಾಷಾ ಜ್ಞಾನ ಬಹಳ ಅಗತ್ಯ. ಇದರಿಂದ ಸತ್ಯಶೋಧನೆ ಸಾಧ್ಯವಾಗುತ್ತದೆ. ಭಾಷಾ ಅಜ್ಞಾನದಿಂದಲೋ ಅಥವಾ ಪೂರ್ವಾಗ್ರಹ ಪೀಡಿತರಾಗಿಯೋ ನಾವು ಬೇರೆ ಬೇರೆ ಭಾಷೆಯ ಶಾಸನ ಮತ್ತು ಸಾಹಿತ್ಯವನ್ನು ಅಧ್ಯಯನ ‌ಮಾಡದಿದ್ದರೆ ನಾವು ಸತ್ಯದಿಂದ, ಸರಿಯಾದ ವಿಷಯ ಗ್ರಹಿಕೆಯಿಂದ ದೂರ ಉಳಿಯಬೇಕಾಗುತ್ತದೆ.

ಶಾಸನಗಳೆಲ್ಲಾ ಸತ್ಯವನ್ನೇ ಹೇಳುತ್ತವೆ ಎಂದಲ್ಲ. ಹಲವು ಶಾಸನಗಳಲ್ಲಿ ಸತ್ಯವನ್ನು ತಿರುಚಿದ ಉದಾಹರಣೆಗಳು ಇವೆ. ತಮಿಳುನಾಡಿನ ವೆಳ್ವಿಕುಡಿ ತಮಿಳು ಶಾಸನದಲ್ಲಿ ಕನ್ನಡದ ದೊರೆಗಳಾದ ಕಳಭ್ರರ ಮೇಲೆ ಆಪಾದನೆ ಮಾಡಿದ್ದಾರೆ. ಕಳಭ್ರರು ಕರ್ನಾಟಕದ ಅತ್ಯಂತ ಪ್ರಾಚೀನ ಕನ್ನಡ ಮನೆತನ ಎಂಬುದಾಗಿ ವಿದ್ವಾಂಸರಾದ ಶಂ. ಭಾ ಜೋಷಿಯವರು ಅಭಿಪ್ರಾಯ ಪಟ್ಟಿದ್ದಾರೆ. ಇಂತಹ ರಾಜಮನೆತನದ ಮೇಲೆ ಇಲ್ಲಸಲ್ಲದ ಆರೋಪ ಮಾಡಿರುವುದು ಸತ್ಯಕ್ಕೆ ದೂರವಾದ ಸಂಗತಿಯಾಗಿದ್ದು, ಜಾತೀಯ, ಮತೀಯ, ಭಾಷಾವ್ಯಾಮೋಹ ಮುಂತಾದ ಪೂರ್ವಾಗ್ರಹಗಳ ಹಿನ್ನೆಲೆಯಲ್ಲಿ ಚರಿತ್ರೆ ನೋಡಿದರೆ ಚರಿತ್ರೆಗೆ ಹಲವು ರೋಗಗಳು ಬರುತ್ತವೆ ಎಂದರು. ಹೀಗಾಗಿ ಶಾಸನಗಳಲ್ಲಿ ಇರುವ ಭಾಷಾ ಸಮಸ್ಯೆಯನ್ನು ಕುರಿತು ಮತ್ತೊಮ್ಮೆ ಚಿಂತಿಸಬೇಕಿದೆ.

ಶಾಸನಗಳಲ್ಲಿಯೂ ತಪ್ಪುಗಳು ಸಂಭವಿಸುತ್ತವೆ. ಇದರಿಂದ ಉದ್ದೇಶಪೂರ್ವಕವಾಗಿಯೋ ಅಥವಾ ಅಜ್ಞಾನದಿಂದಲೋ ಚರಿತ್ರೆಯನ್ನು ತಪ್ಪಾಗಿ ಗ್ರಹಿಸುವ ಸಂಭವವಿರುತ್ತದೆ ಎಂದರು.

ಸಾಮಾಜಿಕ, ಧಾರ್ಮಿಕ, ನೈತಿಕ ಭಾಗವನ್ನು ತಿಳಿದುಕೊಳ್ಳಲು ಶಾಸನವನ್ನು ಅಧ್ಯಯನ ಮಾಡಿ ಚರಿತ್ರೆಯನ್ನು ಮರುಕಟ್ಟಬೇಕಾಗಿದೆ. ಚರಿತ್ರೆಯ ಸಮಗ್ರ ಚಿತ್ರ ದೊರೆಯಬೇಕಾದರೆ, ಈವರೆಗೂ ಆಗಿರುವ ತಪ್ಪುಗಳನ್ನು ತಿದ್ದಿಕೊಳ್ಳಬೇಕಿದೆ. ಇಂದಿನ ಯುವಕರು ಆ ಕೆಲಸ ಮಾಡಬೇಕಿದೆ. ನಮ ಚರಿತ್ರೆಯ ಸ್ಪಷ್ಟ ಸುಂದರ ಚಿತ್ರ ದೊರೆಯುವಂತಾಗಲಿ ಎಂದರು.

ಶಾಸ್ತ್ರೀಯ ಕನ್ನಡ ಅತ್ಯುನ್ನತ ಅಧ್ಯಯನ ಕೇಂದ್ರದ ಯೋಜನಾ ನಿರ್ದೇಶಕರಾದ ಪ್ರೊ. ಎನ್.ಎಂ. ತಳವಾರ ಅವರು ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದರು. ನಮ್ಮ ಅಧ್ಯಯನ ಅಂತರ್ ಶಿಸ್ತೀಯ ನೆಲೆಯಲ್ಲಿ ರೂಪುಗೊಳ್ಳಬೇಕು. ಕನ್ನಡದವರಿಗೆ ಬೇರೆ ಬೇರೆ ಭಾಷೆ ಬರಬೇಕು. ವಿವಿಧ ಮಾನವೀಯ ಶಾಸ್ತ್ರಗಳ ನಡುವೆ ಒಂದು ಕೊಡು-ಕೊಳ್ಳುವಿಕೆ ನಡೆಯಬೇಕು ಆಗ ಮಾತ್ರ ಅಧ್ಯಯನ ಪೂರ್ಣಗೊಳಿಸಲು ಸಾಧ್ಯ ಎಂದರು.
ಶಾಸ್ತ್ರೀಯ ‌ಕನ್ನಡ ಅತ್ಯುನ್ನತ ಅಧ್ಯಯನ ಕೇಂದ್ರದ ಕುರಿತು ಜನರಿಗೆ ಹೆಚ್ಚಿನ ಅರಿವು ಇಲ್ಲ ಎಂದ ಅವರು ಶಾಸ್ತ್ರೀಯ ಕನ್ನಡ ಅತ್ಯುನ್ನತ ಅಧ್ಯಯನ ಕೇಂದ್ರದ ಕಾರ್ಯಯೋಜನೆ ಕುರಿತು ತಿಳಿಸಿಕೊಟ್ಟರು. ಶಾಸನಗಳ ಅಧ್ಯಯನದಿಂದ ಚಲನಶೀಲತೆ ಪ್ರಾಪ್ತಿಯಾಗುತ್ತದೆ ಎಂದ ಅವರು ಎಲ್ಲ ಶಿಬಿರಾರ್ಥಿಗಳಿಗೂ ಶಾಸನ ಅಧ್ಯಯನಕ್ಕೆ ಕರೆಕೊಟ್ಟರು.

ಕಾರ್ಯಾಗಾರದಲ್ಲಿ ಭಾಗವಹಿಸಿದ್ದ ಸಂಶೋಧಕರು, ವಿದ್ಯಾರ್ಥಿಗಳು ಹಾಗೂ ಅಧ್ಯಾಪಕರು ವಿವಿಧ ಶಾಸನಗಳ ಅಧ್ಯಯನದ ಹೊಸ ಆಯಾಮಗಳನ್ನು ಅರಿತುಕೊಳ್ಳಲು ಈ ಕಾರ್ಯಾಗಾರವು ಪರಿಣಾಮಕಾರಿ ವೇದಿಕೆಯಾಗಿತ್ತು ಎಂದು ಶಿಬಿರಾರ್ಥಿಗಳು ಅಭಿಪ್ರಾಯಪಟ್ಟರು.

ಎರಡು ದಿನಗಳ ಕಾರ್ಯಾಗಾರವು ಕನ್ನಡ ಶಾಸನ ಪರಂಪರೆಯ ಸಂರಕ್ಷಣೆ, ಅಧ್ಯಯನ ಮತ್ತು ಸಂಶೋಧನೆಗೆ ಹೊಸ ಚೈತನ್ಯ ನೀಡುವ ಮಹತ್ವದ ಶೈಕ್ಷಣಿಕ ಕಾರ್ಯಕ್ರಮವಾಗಿ ಯಶಸ್ವಿಯಾಗಿ ಸಮಾರೋಪಗೊಂಡಿತು.

Leave a Reply

Your email address will not be published. Required fields are marked *