October 30, 2026

ಸರಳತೆಯಲ್ಲೇ ಅರಳಿದ ಕಾವ್ಯ ‘ಪ್ರೇಮದ ಊರಲಿ’; ಬದಲಾಗುತ್ತಿರುವ ಪ್ರೇಕ್ಷಕರ ಮನಸ್ಥಿತಿ.!

0

ಒಂದು ಸಿನಿಮಾ ಗೆಲ್ಲಬೇಕೆಂದರೆ ಅದು ಮೊದಲನೇ ದಿನವೇ ಹೌಸ್‌ಫುಲ್ ಆಗಬೇಕು ಎಂಬ ದೊಡ್ಡ ಭ್ರಮೆ ನಮ್ಮ ಚಿತ್ರರಂಗದಲ್ಲಿದೆ. ಆದರೆ ಇತ್ತೀಚಿನ ದಿನಗಳಲ್ಲಿ ಬರುತ್ತಿರುವ ಸರಳ, ಸುಂದರ ಚಿತ್ರಗಳು ಈ ಭ್ರಮೆಯನ್ನು ಮೆಲ್ಲನೆ ತೊಡೆದುಹಾಕುತ್ತಿವೆ. ಇದಕ್ಕೆ ಇತ್ತೀಚಿನ ತಾಜಾ ಮತ್ತು ಅತ್ಯುತ್ತಮ ಉದಾಹರಣೆ ಎಂದರೆ ಕನ್ನಡದ ‘ಪ್ರೇಮದ ಊರಲಿ’ ಚಲನಚಿತ್ರ!ಸಿನಿಮಾ ಬಿಡುಗಡೆಗೂ ಮುನ್ನವೇ ಆಟೋಗಳ ಮೇಲೆಲ್ಲಾ ಇದರ ಪ್ರಚಾರದ ಪೋಸ್ಟರ್‌ಗಳು ರಾರಾಜಿಸುತ್ತಿದ್ದವು. ಚಿತ್ರದ ಶೀರ್ಷಿಕೆ ಗೀತೆಯಂತೂ ಸಾಮಾಜಿಕ ಜಾಲತಾಣಗಳಲ್ಲಿ ಭರ್ಜರಿಯಾಗಿ ವೈರಲ್ ಆಗಿತ್ತು. ಆದರೆ ನಿಜವಾದ ಮ್ಯಾಜಿಕ್ ಶುರುವಾಗಿದ್ದು ಸಿನಿಮಾ ಬಿಡುಗಡೆಯಾದ ಎರಡು-ಮೂರನೇ ದಿನದಿಂದ! ಪ್ರೇಕ್ಷಕರಿಂದ ಪ್ರೇಕ್ಷಕರಿಗೆ ಹರಡಿದ ‘ಮೌತ್ ಪಬ್ಲಿಸಿಟಿ’ಯಿಂದಾಗಿ, ಸಿನಿಮಾ ಆರನೇ ದಿನಕ್ಕೆ ಕಾಲಿಡುವ ಹೊತ್ತಿಗೆ ಎಲ್ಲ ಚಿತ್ರಮಂದಿರಗಳು ಜನರಿಂದ ಭರ್ತಿಯಾಗಿ ಹೌಸ್‌ಫುಲ್ ಬೋರ್ಡ್ ತೂಗಾಡುತ್ತಿರುವುದನ್ನು ನಾವು ಕಾಣುತ್ತಿದ್ದೇವೆ. ಜೊತೆಗೆ 3 ಕೋಟಿ ಅಷ್ಟು ಖರ್ಚು ಮಾಡಿ ಆರು ದಿನಕ್ಕೆ ಆರು ಕೋಟಿ ಅಷ್ಟು ಸಂಪಾದನೆ ಮಾಡಿರುವ ಅದ್ಭುತವಾದ ರೆಸ್ಪಾನ್ಸ್ ಈ ಸಿನಿಮಾಗೆ ಸಿಗುತ್ತಿದೆ.ಯಾಕೆ ಗೆಲ್ಲುತ್ತಿದೆ ಈ ಸಿನಿಮಾ? ಪ್ರೇಕ್ಷಕರು ಮೆಚ್ಚುತ್ತಿರುವುದಾದರೂ ಏನನ್ನು?ಸ್ವಲ್ಪ ಆಳವಾಗಿ ಯೋಚಿಸಿದಾಗ ಹಲವು ಆಪ್ತವಾದ ವಿಷಯಗಳು ಕಣ್ಣೆದುರು ಬರುತ್ತವೆ: * ಅದ್ಭುತ ನಟನೆ: ರಂಗಾಯಣ ರಘು ಹಾಗೂ ರಮಿಕಾ ಇಬ್ಬರೂ ತಮ್ಮ ವೃತ್ತಿಜೀವನದ ಅತ್ಯುತ್ತಮ ಅಭಿನಯವನ್ನು ಈ ಚಿತ್ರದಲ್ಲಿ ಧಾರೆ ಎರೆದಿದ್ದಾರೆ. * ಕಣ್ಣಿಗೆ ತಂಪು ನೀಡುವ ಹಳ್ಳಿ ಸೊಗಸು: ಈ ಚಿತ್ರದ ಬಹುದೊಡ್ಡ ಆಕರ್ಷಣೆ ಎಂದರೆ ಹಳ್ಳಿಯ ಹಸಿರು ಪರಿಸರ ಮತ್ತು ಅದರ ನೈಜ ಸೌಂದರ್ಯ. * ಮನಮಿಡಿಯುವ ಹಿನ್ನೆಲೆ ಸಂಗೀತ: ದೃಶ್ಯಗಳಿಗೆ ಜೀವ ತುಂಬುವಂತಹ ಹಿನ್ನೆಲೆ ಸಂಗೀತ ಚಿತ್ರದ ಜೀವಾಳವಾಗಿದೆ. * ನೈಜ ಸಂಬಂಧಗಳ ಭಾವನೆಗಳು: ಅಪ್ಪ-ಮಗನ ನಡುವಿನ ಭಾವನಾತ್ಮಕ ಬಂಧ, ಅಣ್ಣ-ತಂಗಿಯ ವಾತ್ಸಲ್ಯ, ತ್ರಿಕೋನ ಪ್ರೇಮಕಥೆ, ಹಳ್ಳಿ ಹುಡುಗರಿಗೆ ಹೆಣ್ಣು ಸಿಗದ ಸಂಕಷ್ಟ ಮತ್ತು ಓದಿಕೊಂಡ ಹುಡುಗಿಯ ವರ್ತನೆಯ ಸುತ್ತ ಹರಡುವ ಹಳ್ಳಿಯ ವದಂತಿಗಳು.. ಇವೆಲ್ಲವನ್ನೂ ಯಾವುದೇ ಆಡಂಬರವಿಲ್ಲದೆ ತೆರೆಯ ಮೇಲೆ ತರಲಾಗಿದೆ.ಯಾವುದೇ ಅಬ್ಬರವಿಲ್ಲದೆ, ಲಾಂಗು-ಮಚ್ಚುಗಳ ರಕ್ತಪಾತವಿಲ್ಲದೆ, ಮನಸ್ಸಿಗೆ ಮುದನೀಡುವ ಸುಂದರ ದೃಶ್ಯಗಳ ಮೂಲಕ ಒಂದು ಸಾಮಾನ್ಯ ಹಳ್ಳಿಯ ಕಥೆಯನ್ನು ಅತ್ಯಂತ ಸುಂದರವಾಗಿ ಹೆಣೆಯಲಾಗಿದೆ. ಇದು ‘ಜಗತ್ತಿನ ಬೆಸ್ಟ್ ಸಿನಿಮಾ’ ಎನಿಸದಿದ್ದರೂ, ಯಾವುದೇ ಬೇಸರವಿಲ್ಲದೆ ಆರಾಮವಾಗಿ ಕುಳಿತು ನೋಡಿ ಕಣ್ತುಂಬಿಕೊಳ್ಳಬಹುದಾದ ಮನರಂಜನಾತ್ಮಕ, ಭಾವನಾತ್ಮಕ ಚಿತ್ರವಾಗಿದೆ.ಈ ಚಿತ್ರದ ಅತಿದೊಡ್ಡ ಹೆಗ್ಗಳಿಕೆ ಏನೆಂದರೆ, ಇದನ್ನು ಗೆಲ್ಲಿಸುತ್ತಿರುವುದು ಸಿನಿಮಾ ತಂತ್ರಜ್ಞರೋ ಅಥವಾ ಗಂಭೀರ ಸಿನಿಮಾ ವಿಮರ್ಶಕರೋ ಅಲ್ಲ! ಬದಲಾಗಿ, ಸಂಜೆ ಮನೆಯಲ್ಲಿ ಕುಳಿತು ಧಾರಾವಾಹಿಗಳನ್ನು ನೋಡುತ್ತಿದ್ದ ಅಪ್ಪಟ ಕೌಟುಂಬಿಕ ಪ್ರೇಕ್ಷಕರು ಇಂದು ದಂಡು ದಂಡಾಗಿ ಚಿತ್ರಮಂದಿರಗಳತ್ತ ಮುಖ ಮಾಡಿದ್ದಾರೆ. ರಾತ್ರಿ 10 ಗಂಟೆಯ ಪ್ರದರ್ಶನ ಕೂಡ ಹೌಸ್‌‌ಫುಲ್ ಆಗುತ್ತಿದೆ ಎಂದರೆ, ನೂರಾರು ಕೋಟಿ ಸುರಿದು ಅಬ್ಬರದ ಸಿನಿಮಾಗಳನ್ನು ಮಾಡಬೇಕೆ ಎಂಬ ಪ್ರಶ್ನೆ ಸಿನಿಮಾ ಪ್ರಿಯರಿಗೆ ಮೂಡುವುದು ಸಹಜ.ಕೇವಲ ₹2 ಕೋಟಿ ಬಜೆಟ್‌ನಲ್ಲಿ ತಯಾರಾಗಿ ಸುಮಾರು ₹400 ಕೋಟಿ ಗಳಿಸಿದ ‘ಹನುಮಾನ್ ಅಂಶ್’, ಹಾಗೂ ಈ ಹಿಂದೆ ಬಂದ ‘ಸೂ ಫ್ರಂ ಸೋ’ ಮತ್ತು ಸೂರ್ಯ ಅವರ ‘ವಿಶ್ವನಾಥ್ & ಸನ್ಸ್’ ನಂತಹ ಚಿತ್ರಗಳನ್ನು ಪ್ರೇಕ್ಷಕರು ಏಕೆ ಇಷ್ಟಪಟ್ಟರು? ಅದಕ್ಕೆ ಉತ್ತರವಾಗಿ ಪ್ರೇಮದ ಊರಲಿ ಸಿನೆಮಾ ನಿಂತಿದೆ.ಇಂದಿನ ಜನ ಈ ವೇಗದ, ಯಾಂತ್ರಿಕ ಬದುಕಿನ ಓಟದಿಂದ ಬೇಸತ್ತಿದ್ದಾರೆ. ಅವರಿಗೆ ಬೇಕಾಗಿರುವುದು ಮನಸ್ಸಿಗೆ ಶಾಂತಿ, ನೆಮ್ಮದಿ, ಒರಗಿಕೊಳ್ಳಲು ಒಂದು ಆಪ್ತವಾದ ಹೆಗಲು, ಕಣ್ಣೀರು ಒರೆಸುವ ಕೈಗಳು ಮತ್ತು ಸಮಾಧಾನ ನೀಡುವ ನಾಲ್ಕು ಪ್ರೀತಿಯ ಮಾತುಗಳು. ಪ್ರೀತಿಯ ಅಲೆ, ಸ್ನೇಹ, ಮೌಲ್ಯಗಳು, ನಂಬಿಕೆ ಹಾಗೂ ಸನ್ಮಾರ್ಗಗಳ ಹುಡುಕಾಟದಲ್ಲಿದ್ದಾರೆ. 25 ವರ್ಷಗಳ ಹಿಂದೆ ನಾವು ಅನುಭವಿಸುತ್ತಿದ್ದ ಆ ಸರಳ ಜೀವನ ಮೌಲ್ಯಗಳನ್ನು ಜನ ಇಂದು ಸಿನಿಮಾಗಳಲ್ಲಿ ಹುಡುಕುತ್ತಿದ್ದಾರೆ.ನಾವು ಮುಂದೆ ಸಾಗಬೇಕಾದರೆ, ಒಮ್ಮೆ ಆ 25 ವರ್ಷಗಳ ಹಿಂದಿನ ಸರಳತೆ, ಆಪ್ತತೆ ಮತ್ತು ಮಾನವೀಯ ಸಂಬಂಧಗಳ ಕಡೆಗೆ ತಿರುಗಿ ನೋಡಿ ನಮ್ಮ ಹೆಜ್ಜೆಗಳನ್ನು ಇಡಬೇಕಿದೆ. ‘ಪ್ರೇಮದ ಊರಲಿ’ ಅಂತಹ ಒಂದು ಆತ್ಮೀಯ ನೆನಪನ್ನು ಮತ್ತು ಅನುಭವವನ್ನು ಪ್ರೇಕ್ಷಕರಿಗೆ ಉಣಬಡಿಸುತ್ತಿದೆ

Leave a Reply

Your email address will not be published. Required fields are marked *