August 31, 2026

ತಮಿಳುನಾಡಿನೊಂದಿಗೆ ರಾಜಿ ರಾಜಕೀಯ

0

ತಮಿಳುನಾಡಿನೊಂದಿಗೆ ತನ್ನ ರಾಜಕೀಯ ಹಿತಾಸಕ್ತಿಯನ್ನು ಕಾಪಾಡಿಕೊಳ್ಳುವ ಉದ್ದೇಶದೊಂದಿಗೆ ರಾಜಿ ಮಾಡಿಕೊಂಡು ನೀರು ಬಿಡುಗಡೆ ಮಾಡುತ್ತಿರುವ ರಾಜ್ಯ ಸರ್ಕಾರ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದಲ್ಲಿ ರಾಜ್ಯದ ಹಕ್ಕು ಮಂಡಿಸುತ್ತಿಲ್ಲ ಎಂದು ಕರ್ನಾಟಕ ರಾಜ್ಯ ರೈತ ಸಂಘ ಮೂಲ ಸಂಘಟನೆ ಜಿಲ್ಲಾಧ್ಯಕ್ಷ ನಾರಾಯಣ್ ಆರೋಪಿಸಿದರು.ಸರ್ಕಾರ ರೈತ ವಿರೋಧಿ ನೀತಿಯನ್ನು ಅನುಸರಣೆ ಮಾಡುವ ಮೂಲಕ ತಮಿಳುನಾಡಿಗೆ ನೀರು ಬಿಟ್ಟು, ರಾಜ್ಯದ ರೈತರನ್ನು ಅದೋಗತಿಗೆ ತಳ್ಳುವ ಪ್ರಯತ್ನ ಮಾಡುತ್ತಿದ್ದಾರೆ. ಕಾವೇರಿ ರಾಜ್ಯದ ಸಂಪತ್ತು. ಇಲ್ಲಿನ ಜನರ ಅಭಿವೃದ್ಧಿಗೆ ಕಾವೇರಿ ನೀರು ಬಳಸಬೇಕೆ ವಿನಃ ಅನ್ಯ ರಾಜ್ಯದ ಅಭಿವೃದ್ಧಿ ನಮಗೆ ಬೇಕಿಲ್ಲ ಎಂದು ಸುದ್ದಿಗೋಷ್ಠಿಯಲ್ಲಿ ಅವರು ಆಕ್ರೋಶ ವ್ಯಕ್ತಪಡಿಸಿದರು. ರಾಜ್ಯದಲ್ಲಿರುವ ನೀರನ್ನು 10 ದಿನ ನಿಲ್ಲಿಸಿ 20 ದಿನ ನಾಲೆಗಳಿಗೆ ಹರಿಸುವ ಮೂಲಕ ಭತ್ತ ಬೆಳೆಯನ್ನು ಬೆಳೆಯಲು ಅನುಕೂಲ ಮಾಡಿಕೊಡಬೇಕು. ಕಾವೇರಿ ನೀರು ರಾಜ್ಯದ ಸಂಪತ್ತು. ಆ ಸಂಪತ್ತು ರಾಜ್ಯದ ಜನರ ಅಭಿವೃದ್ಧಿಗೆ ಬಳಕೆಯಾಗಬೇಕೆ ವಿನಃ ಅನ್ಯ ರಾಜ್ಯದ ಜನರ ಹಿತಕ್ಕಾಗಿ ಬಳಕೆಯಾಗುವುದು ಬೇಡ. ಕೂಡಲೇ ಸರ್ಕಾರ ಎಚ್ಚತ್ತು ನಾಲೆಗಳಿಗೆ ನೀರು ಬಿಡಬೇಕು. ಇಲ್ಲದೇ ಹೋದಲ್ಲಿ ರಾಜ್ಯಾದ್ಯಂತ ತಾಲ್ಲೂಕು ಆಡಳಿತ, ಜಿಲ್ಲಾ ಆಡಳಿತದ ಮುಂದೆ ಜಾನುವಾರುಗಳೊಂದಿಗೆ ಉಗ್ರವಾದ ಹೋರಾಟವನ್ನು ಮಾಡಬೇಕಾಗುತ್ತದೆ ಎಂದು ಎಚ್ಚರಿಕೆಯನ್ನು ನೀಡಿದರು.ಕಬ್ಬು ಬೆಳೆದು ಅವಧಿ ಮುಗಿಯುತ್ತಿದ್ದರೂ ಇನ್ನೂ ಕಟಾವು ಮಾಡುತ್ತಿಲ್ಲ. ಇದರಿಂದ ರೈತರಿಗೆ ಬಹಳಷ್ಟು ನಷ್ಟವನ್ನುಂಟು ಮಾಡಿದಂತೆ ಆಗುತ್ತಿದೆ. ಕೂಡಲೇ ಅವಧಿ ಮೀರಿದ ಕಬ್ಬಿನ ಕಟಾವು ಮಾಡಿಸಲು ಸರ್ಕಾರ ಸಕ್ತರ ಕಾರ್ಖಾನೆಯ ಮಾಲೀಕರಿಗೆ ಆದೇಶ ಮಾಡಬೇಕು. ಹಾಗೆಯೇ ಜಿಲ್ಲಾ ಹಂತದಲ್ಲಿ ಹೊಸದಾಗಿ ಸಕ್ಕರೆ ಕಾರ್ಖಾನೆ ತೆರೆಯಲು ಅರ್ಜಿ ಸಲ್ಲಿಸಿರುವ ಅರ್ಜಿಯನ್ನು ಪುರಸ್ಕರಿಸಿ ಜಿಲ್ಲೆಗೆರಡು ಕಾರ್ಖಾನೆಯನ್ನು ಆರಂಭಿಸಬೇಕು.ಆಗ ಕಬ್ಬಿನ ಇಳುವರಿಯೂ ಹೆಚ್ಚಾಗುತ್ತದೆ ಎಂದು ತಿಳಿಸಿದರು.ಸಕ್ಕರೆ ಬೆಲೆಯು ಹೆಚ್ಚಳವಾಗಿದ್ದು, ಅದರ ಲಾಭಂಶವು ರೈತರಿಗೆ ಸಿಗುವಂತೆ ಮಾಡಲು ಕೇಂದ್ರ ಹಾಗೂ ರಾಜ್ಯ ಸರ್ಕಾರ ಕಬ್ಬಿನ ಪ್ರತಿ ಟನ್ ಗೆ 5000 ನಿಗದಿ ಮಾಡಬೇಕೆಂದು ಅವರು ಆಗ್ರಹಿಸಿದರು.ಬೀದಿನಾಯಿಗಳಹಾವಳಿ: ಬೆಟ್ಟಹಳ್ಳಿ ಶಿವರಾಂಮಾತನಾಡಿ, ಬೀದಿನಾಯಿಗಳ ಸಂಖ್ಯೆ ಹೆಚ್ಚಾಗಿದ್ದು, ಜನರು ರಾತ್ರಿಯ ವೇಳೆಯಲ್ಲಿ ಓಡಾಡಲು ಭಯಭೀತಿ ಪಡುವಂತಾಗಿದೆ. ತಾಲೂಕು ಆಡಳಿತ ಹಾಗೂ ಜಿಲ್ಲಾಡಳಿತ ನಾಯಿ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳಬೇಕೆಂದು ಅವರು ಆಗ್ರಹಿಸಿದರು. ಹೊನ್ನೆಗೌಡ, ರಾಜಣ್ಣ, ವಿಶ್ವನಾಥ್, ಗಣೇಶ್, ನಿಂಗೇಗೌಡ, ಕಾಳೇಗೌಡ, ನಾಗರಾಜು, ಜಯರಾಂ, ಪ್ರಕಾಶ್, ರವೀಂದ್ರ ಇದ್ದರು.

Leave a Reply

Your email address will not be published. Required fields are marked *