August 16, 2026

ಮೈಸೂರು: ಇಬ್ಬರು ಮಕ್ಕಳು, ಹೆಂಡತಿ ಕೊಂದು ಪತಿ ಆತ್ಮಹತ್ಯೆ

0

ವ್ಯಕ್ತಿಯೋರ್ವ ಹೆಂಡ್ತಿ ಮಕ್ಕಳನ್ನು ಕೊಂದು ಬಳಿಕ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮೈಸೂರು ಜಿಲ್ಲೆಯಲ್ಲಿ ನಡೆದಿದೆ.

V TIMES KANNAD

ಮೈಸೂರು: ಇಬ್ಬರು ಮಕ್ಕಳು ಮತ್ತು ಹೆಂಡತಿಯನ್ನು ಕೊಂದು ಬಳಿಕ ಪತಿಯೂ ಆತ್ಮಹತ್ಯೆ ಮಾಡಿಕೊಂಡಿರುವ ಹೃದಯವಿದ್ರಾವಕ ಘಟನೆ ಜಿಲ್ಲೆಯ ಹುಣಸೂರಿನಲ್ಲಿ ನಡೆದಿದೆ.

ಹರೀಶ್ (49) ಪತ್ನಿ ನಿಶ್ಚಿತ (36) ಮತ್ತು 13 ಹಾಗೂ 6 ವರ್ಷದ ಮಕ್ಕಳು ಮೃತರೆಂದು ಗುರುತಿಸಲಾಗಿದೆ. ಹೆಂಡತಿ ಮಕ್ಕಳ ಬಾಯಿಗೆ ಪ್ಲಾಸ್ಟರ್ ಅಂಟಿಸಿ, ಉಸಿರುಗಟ್ಟಿಸಿ ಕೊಲೆ ಮಾಡಿರುವ ಹರೀಶ್​, ಬಳಿಕ ತಾನೂ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಹುಣಸೂರು ನಗರದ ನ್ಯೂ ಮಾರುತಿ ಬಡಾವಣೆಯಲ್ಲಿ ಈ ದುರಂತ ನಡೆದಿದೆ. ಕಳೆದ ಮೂರು ದಿನಗಳ ಹಿಂದೆ ತಮ್ಮ ತಾಯಿಯನ್ನು ಹರೀಶ್​ ಅಜ್ಜಿ ಮನೆಗೆ ಕಳುಹಿಸಿದ್ದರು ಎಂದು ತಿಳಿದುಬಂದಿದೆ. ಸ್ಥಳಕ್ಕೆ ಹುಣಸೂರು ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ. ಈ ಕೊಲೆ ಮತ್ತು ಆತ್ಮಹತ್ಯೆಗೆ ನಿಖರ ಕಾರಣ ಈವರೆಗೆ ಗೊತ್ತಾಗಿಲ್ಲ.

ಸೋಮವಾರ ರಾತ್ರಿಯೇ ಈ ಘಟನೆ ನಡೆದಿರುವ ಶಂಕೆ ಇದೆ. ಇಂದು ಬೆಳಗ್ಗೆ ಎಷ್ಟೊತ್ತಾದರೂ ಮನೆ ಬಾಗಿಲು ತೆರೆಯದೇ ಇದ್ದಾಗ ಅಕ್ಕಪಕ್ಕದವರು, ಕಿಟಕಿ ಮೂಲಕ ನೋಡಿದಾಗ ಪ್ರಕರಣ ಬೆಳಕಿಗೆ ಬಂದಿದೆ.

ಎಸ್​ಪಿ ಪ್ರತಿಕ್ರಿಯೆ: ಘಟನೆ ಕುರಿತು ಪ್ರತಿಕ್ರಿಯೆ ನೀಡಿರುವ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ, ನ್ಯೂ ಮಾರುತಿ ಬಡಾವಣೆಯಲ್ಲಿ ವಾಸವಿದ್ದ ಹರೀಶ್ ತನ್ನ ಹೆಂಡತಿ ನಿಶ್ಚಿತ ಹಾಗೂ ಇಬ್ಬರು ಮಕ್ಕಳನ್ನು ಕೊಲೆಗೈದು ಬಳಿಕ ತಾನೂ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂಬ ಮಾಹಿತಿಯ ಹಿನ್ನೆಲೆಯಲ್ಲಿ ಹುಣಸೂರು ನಗರ ಪೊಲೀಸರು ಹಾಗೂ ಎಸ್​ಪಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಹೆಂಡತಿ ನಿಶ್ಚಿತ ಹಾಗೂ ಇಬ್ಬರು ಮಕ್ಕಳು ಒಂದೇ ಬೆಡ್​ರೂಮಿನಲ್ಲಿ ಮಲಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಮೂವರಿಗೂ ಮೂಗು ಮತ್ತು ಬಾಯಿಗೆ ಪ್ಲಾಸ್ಟರ್ ಅಂಟಿಸಿ ಉಸಿರುಗಟ್ಟಿಸಿ ಕೊಲೆ ಮಾಡಿರುವ ಹರೀಶ್​, ಬಳಿಕ ತಾನೂ ಮೊದಲ ಮಹಡಿಗೆ ಹೋಗಿ ಆತ್ಮಹತ್ಯೆ ಮಾಡಿಕೊಂಡಿರುವುದು ಕಂಡುಬಂದಿದೆ. ಮನೆಯಲ್ಲಿ ಪುಸ್ತಕದೊಳಗೆ ಡೆತ್​ನೋಟ್ ಪತ್ತೆಯಾಗಿದ್ದು, ಅದರಲ್ಲಿ ಹಲವು ವಿಷಯಗಳು ಉಲ್ಲೇಖವಾಗಿವೆ. ಹರೀಶ್ ತಾನು ಮಾಡಿರುವ ಸಾಲದ ಬಗ್ಗೆ, ಆಸ್ತಿ ಮಾಡಿರುವ ಬಗ್ಗೆ ಹಾಗೂ ಆಸ್ತಿ ಯಾರ್​ ಯಾರಿಗೆ ಹೋಗಬೇಕು ಎಂಬುದನ್ನು ಸಹ ಬರೆದಿದ್ದಾನೆ. ಜೊತೆಗೆ ತಾಯಿಗೆ ಯಾವ ಆಸ್ತಿ ಹೋಗಬೇಕು ಎಂಬುದನ್ನು ಸಹ ಉಲ್ಲೇಖ ಮಾಡಿದ್ದಾರೆ. ಹೆಚ್ಚಿನ ತನಿಖೆಯಿಂದ ಮತ್ತಷ್ಟು ವಿಷಯಗಳು ತಿಳಿಯಲಿವೆ ಎಂದು ಹೇಳಿದ್ದಾರೆ.

ಆತ್ಮಹತ್ಯೆ ಪರಿಹಾರವಲ್ಲ: ನೀವು ಆತ್ಮಹತ್ಯೆ ಆಲೋಚನೆಗಳನ್ನು ಹೊಂದಿದ್ದರೆ, ಅಥವಾ ಸ್ನೇಹಿತರ ಬಗ್ಗೆ ಚಿಂತಿತರಾಗಿದ್ದರೆ ಅಥವಾ ಭಾವನಾತ್ಮಕ ಬೆಂಬಲದ ಅಗತ್ಯವಿದ್ದರೆ, ಯಾರಾದರೂ ಯಾವಾಗಲೂ ಕೇಳಲು ಇರುತ್ತಾರೆ. ಸ್ನೇಹ ಫೌಂಡೇಶನ್ – 04424640050 (24×7 ಲಭ್ಯವಿದೆ) ಅಥವಾ ಟಾಟಾ ಇನ್ಸ್ಟಿಟ್ಯೂಟ್ ಆಫ್ ಸೋಶಿಯಲ್ ಸೈನ್ಸಸ್‌ನ ಸಹಾಯವಾಣಿ – 9152987821 ಗೆ ಕರೆ ಮಾಡಿ, ಇದು ಸೋಮವಾರದಿಂದ ಶನಿವಾರದವರೆಗೆ ಬೆಳಗ್ಗೆ 8 ರಿಂದ ರಾತ್ರಿ 10 ರವರೆಗೆ ಲಭ್ಯವಿದೆ.

Leave a Reply

Your email address will not be published. Required fields are marked *